/* */ Let's THINK : By Dr.King, Swami Satyapriya: [Kannada] ಸುಖದ ಕಡೆಗೆ ಕರೆದೊಯ್ಯುವ ಎರಡು ಸಂಗೀತದ ಹಾದಿಗಳು

Saturday, October 24, 2026

[Kannada] ಸುಖದ ಕಡೆಗೆ ಕರೆದೊಯ್ಯುವ ಎರಡು ಸಂಗೀತದ ಹಾದಿಗಳು

 
 
 
ನೀವು ಸಂಗೀತ ಪ್ರಿಯರಾಗಿದ್ದರೆ ನೀವು ಈ ಮಾತನ್ನು ಗಮನಿಸಿರಬಹುದು.
ವೇಗವಾದ, ಚಕಿತಗೊಳಿಸುವ ಜ್ಯಾಝ್ ಸೋಲೋ ಅಥವಾ ಹೆವಿ ರಾಕ್ ಹಾಡು ನಿಮ್ಮಲ್ಲಿ ಎಲ್ಲಿಲ್ಲದ ಉತ್ಸಾಹವನ್ನು ತುಂಬುತ್ತದೆ.

ಅದೇ ವೇಳೆ, ಸಾಂಪ್ರದಾಯಿಕ ಭಾರತೀಯ ಶಾಸ್ತ್ರೀಯ ಸಂಗೀತವು ನೀವು ಕಣ್ಣು ಮುಚ್ಚಿ,, ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡುತ್ತದೆ.

ಇದಕ್ಕೆ ಕಾರಣ ಏನೆಂದು ನೀವು ಎಂದಾದರೂ ಯೋಚಿಸಿದ್ದೀರಾ?
 
ಸಂಗೀತ ಆಸ್ವಾದನೆ ಎನ್ನುವುದು ಕೇವಲ ವೈಯಕ್ತಿಕ ಅಭಿರುಚಿಗೆ ಸಂಬಂಧಿಸಿದ್ದು ಎಂದು ಹೆಚ್ಚಿನ ಜನರು ಭಾವಿಸುತ್ತಾರೆ.

ಆದರೆ ಆಳವಾಗಿ ನೋಡಿದರೆ, ಸಂಗೀತವು ವಾಸ್ತವವಾಗಿ ನಿಮ್ಮ ಮೆದುಳಿನ ರಾಸಾಯನಿಕಗಳನ್ನು ನಿಯಂತ್ರಿಸುವ ಒಂದು ರಿಮೋಟ್ ಕಂಟ್ರೋಲ್ ಇದ್ದಂತೆ.

ಪಾಶ್ಚಾತ್ಯ ಸಂಗೀತ ಮತ್ತು ಭಾರತೀಯ ಶಾಸ್ತ್ರೀಯ ಸಂಗೀತ ನಮ್ಮನ್ನು ಸಂತೋಷಪಡಿಸಲು ಎರಡು ಸಂಪೂರ್ಣ ಭಿನ್ನವಾದ ಹಾದಿಗಳನ್ನು ಆಯ್ದುಕೊಳ್ಳುತ್ತವೆ.

ಒಂದು, ನಿಮ್ಮ ಮೆದುಳಿಗೆ ರೋಲರ್ ಕೋಸ್ಟರ್ನ ಸವಾರಿಯ ಅನುಭವ ನೀಡಿ ರೋಮಾಂಚನಗೊಳಿಸಿದರೆ, ಮತ್ತೊಂದು, ನಿಮ್ಮ ಮನಸ್ಸನ್ನು ಯಾವುದೇ ಒತ್ತಡವಿಲ್ಲದ ಸಂಪೂರ್ಣ ಶಾಂತ ಸ್ಥಿತಿಗೆ ತಲುಪಿಸುವ ಒಂದು ಹಿತವಾದ ಮಸಾಜ್ನಂತೆ ಕೆಲಸ ಮಾಡುತ್ತದೆ.

ಸಂಗೀತವು ನಮ್ಮ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವ ಮೊದಲು, ಒತ್ತಡ ಅಂದರೆ ನಿಜಕ್ಕೂ ಏನು ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು.

ಒತ್ತಡ ಎನ್ನುವುದು ಮನಸ್ಸಿನ ಒಂದು ಕೆಟ್ಟ ಸ್ಥಿತಿಯಲ್ಲ; ಅದು, ನಿಮ್ಮ ದೇಹ ತನ್ನೊಳಗೆ ಅಳವಡಿಸಿಕೊಂಡಿರುವ ಒಂದು ಸ್ವಯಂಚಾಲಿತ ಆತ್ಮರಕ್ಷಣೆಯ ವಿಧಾನ.

ನೀವು ಕಾಡಿನಲ್ಲಿ ನಡೆದುಕೊಂಡು ಹೋಗುತ್ತಿರುವಾಗ, ಇದ್ದಕ್ಕಿದ್ದಂತೆ ಪೊದೆಯಿಂದ ಒಂದು ಹುಲಿ ನಿಮ್ಮ ಮುಂದೆ ಜಿಗಿಯುತ್ತದೆ ಎಂದು ಊಹಿಸಿಕೊಳ್ಳಿ.

ಆಗ ನಿಮ್ಮ ಇಂದ್ರಿಯಗಳು ಹೇಗೆ ಪ್ರತಿಕ್ರಯಿಸುತ್ತವೆ?

ಇದ್ದಕ್ಕಿದ್ದಂತೆ ನಿಮ್ಮ ಕಣ್ಣು ಮತ್ತು ಕಿವಿಗಳಿಗೆ ಜೋರಾದ ಮತ್ತು ಗೊಂದಲಮಯವಾದ ಮಾಹಿತಿ ಲಗ್ಗೆ ಇಡುತ್ತದೆ. ಹುಲಿ ವೇಗವಾಗಿ ಮುನ್ನುಗ್ಗುವ ಚಿತ್ರಣ, ಅದು ಮಾಡುವ ಆರ್ಭಟ, ಇತ್ಯಾದಿ.

ನಿಮ್ಮ ಮೆದುಳಿಗೆ ಆಲೋಚಿಸಲು ಸಮಯವೇ ಇರುವುದಿಲ್ಲ.

ಅದು ಈ ಹಠಾತ್ ಗೊಂದಲವನ್ನು ಬಾಹ್ಯ ದಾಳಿ ಎಂದು ಅರ್ಥೈಸಿಕೊಳ್ಳುತ್ತದೆ.

ನಿಮ್ಮ ದೇಹ ಈಗ "ಹೋರಾಡು ಅಥವಾ ಓಡಿಹೋಗು" ಎಂಬ ಸಂಧಿದ್ದದಲ್ಲಿದೆ. ಈ ಎರಡಕ್ಕೂ ನಿಮ್ಮ ಸ್ನಾಯುಗಳಲ್ಲಿ ಅಧಿಕ ಶಕ್ತಿಯ ಅವಶ್ಯಕತೆ ಇದೆ,

ತಕ್ಷಣವೇ ಮೆದುಳು, ತುರ್ತು ಸಂಕೇತವನ್ನು ರವಾನಿಸಿ ನಿಮ್ಮ ದೇಹದಲ್ಲಿ ಅಡ್ರಿನಾಲಿನ್ ಹರಿಯುವಂತೆ ಮಾಡುತ್ತದೆ.

ಇದರ ಪರಿಣಾಮವಾಗಿ, ನಿಮ್ಮ ಉಸಿರಾಟ ಹೆಚ್ಚುತ್ತದೆ, ನಿಮ್ಮ ಹೃದಯ ಬಡಿತ ತೀವ್ರಗೊಳ್ಳುತ್ತದೆ. ತತ್ ಪರಿಣಾಮವಾಗಿ ನಿಮ್ಮ ಸ್ನಾಯುಗಳಿಗೆ ಹೆಚ್ಚು ಶಕ್ತಿ ಪೂರೈಕೆಯಾಗುತ್ತದೆ. ದೇಹ ಈಗ "ಹೋರಾಡು ಅಥವಾ ಓಡಿಹೋಗು", ಎರಡಕ್ಕೂ ಸನ್ನಧ್ದವಾಗುತ್ತದೆ.

ಹಾಗಾಗಿ, ಒತ್ತಡ ಎಂಬುದು ಒಂದು ಆತ್ಮರಕ್ಷಣೆಗೆ ಬೇಕೇ ಆದ ಅನಿವಾರ್ಯ ಪ್ರಕ್ರಿಯೆ. ಮಿತಿಯಲ್ಲಿದ್ದರೆ ಅದು ಒಳ್ಳೆಯದೇ. ಆದರೆ ಅದು ಮಿತಿಮೀರಿದರೆ ದೇಹಕ್ಕೆ ಹಾನಿಕಾರಕ.

ಇಲ್ಲಿದೆ ನೋಡಿ ಅಸಲಿ ರಹಸ್ಯ: ನಿಮ್ಮ ಮೆದುಳಿನ ಕೆಳಸ್ತರದ ಆತ್ಮರಕ್ಷಣೆಯ ವ್ಯವಸ್ಥೆಗೆ ಬಾಹ್ಯ ಅಪಾಯದ ಸೂಚನೆ ಯಾವುದು, ಮತ್ತು ಶಬ್ದದ ಮೂಲಕ ಬರುವ, ಅಪಾಯದಂತೆ ಭಾಸವಾಗುವ, ಸೂಚನೆ ಯಾವುದು ಎನ್ನುವ ವ್ಯತ್ಯಾಸ ತಿಳಿಯುವುದಿಲ್ಲ.

ಕಾಡು ಪ್ರಾಣಿಯ ಹಠಾತ್ ಆಕ್ರಮಣವಾಗಲೀ, ಅಥವಾ ಸಂಗೀತದಲ್ಲಿ ಬರುವ ಗೊಂದಲಮಯ ಸ್ವರಗಳ ಆರ್ಭಟವಿರಲಿ, ಮೆದುಳಿನ ಪ್ರತಿಕ್ರಿಯೆ ಮಾತ್ರ ಒಂದೇ ಆಗಿರುತ್ತದೆ.

ಕೆಳಸ್ತರದ ಮೆದುಳು ಇಂತಹ ವೇಗವಾಗಿ ಬರುವ ಸೂಚನೆಗಳನ್ನು ಅಪಾಯ ಎಂದೇ ಪರಿಗಣಿಸುತ್ತದೆ ಮತ್ತು ನಿಮ್ಮ ದೇಹವು ಒತ್ತಡದ ಸ್ಥಿತಿಯನ್ನು ತಲುಪುತ್ತದೆ.

ಈಗ ಪಾಶ್ಚಾತ್ಯ ಸಂಗೀತ ಸಾಗುವ ರೀತಿಯನ್ನು ಸ್ವಲ್ಪ ಗಮನವಿಟ್ಟು ನೋಡೋಣ.

ಶಾಸ್ತ್ರೀಯ ಸಿಂಫನಿಗಳಿಂದ ಹಿಡಿದು ಆಧುನಿಕ ಜ್ಯಾಝ್, ಪಾಪ್ ಮತ್ತು ರಾಕ್ ವರೆಗಿನ ಪಾಶ್ಚಾತ್ಯ ಸಂಗೀತಗಳನ್ನು ಒಂದು ಕಥೆ ಹೇಳುವ ನಾಟಕದಂತೆ ರೂಪಿಸಲಾಗುತ್ತದೆ. ನಿಮ್ಮ ಗಮನವನ್ನು ಹಿಡಿದಿಟ್ಟುಕೊಳ್ಳಲು, ಉದ್ದೇಶಪೂರ್ವಕವಾಗಿಯೇ ಅದು ತೀವ್ರತೆ ಅಥವಾ ಉದ್ವೇಗವನ್ನು ಬಳಸುತ್ತದೆ.

ಪಾಶ್ಚಾತ್ಯ ಸಂಗೀತಗಾರರು ಈ ಉದ್ದೇಶಕ್ಕಾಗಿ 'ಡಿಸೋನೆನ್ಸ್' ಅಂದರೆ ಒಟ್ಟಿಗೆ ಕೇಳಲು ಕರ್ಕಶವಾಗಿರುವ ಸ್ವರಗಳನ್ನು, ಮತ್ತು 'ಸಿಂಕೋಪೇಶನ್' ಅಂದರೆ ರಿದಮ್ ಅನ್ನು ಮುರಿಯುವ, ಊಹಿಸಲಾಗದ ವಿಚಿತ್ರ ಬೀಟ್ಗಳನ್ನು ಬಳಸುತ್ತಾರೆ.

ನೀವು ಜ್ಯಾಝ್ ಸಂಗೀತದ ಅದ್ಭುತ ಸುಧಾರಣೆಗಳನ್ನು ಅಥವಾ ಹೆವಿ ರಾಕ್ ಹಾಡನ್ನು ಕೇಳುತ್ತಿರುವಾಗ, ಸಂಗೀತವು ಹೇಗೆ ಮುನ್ನಡೆಯುತ್ತದೆ ಎಂದು ನಿಮ್ಮ ಮೆದುಳಿಗೆ ಊಹಿಸಲು ಸಾಧ್ಯವಾಗುವುದಿಲ್ಲ.

ಈ ಹಠಾತ್ ಬದಲಾವಣೆಗಳು, ಮತ್ತು ಗೊಂದಲಮಯ ಶಬ್ದಗಳು, ಮೆದುಳಿನ ಆತ್ಮರಕ್ಷಣೆಯ ಎಚ್ಚರಿಕಾವ್ಯವಸ್ಥೆಯನ್ನು ಸಣ್ಣ ಪ್ರಮಾಣದಲ್ಲಿ ಪ್ರಚೋದಿಸುತ್ತವೆ. ಪರಿಣಾಮ ಸ್ವರೂಪವಾಗಿ, ನಿಮ್ಮ ದೇಹವು ಅಲ್ಪ ಪ್ರಮಾಣದಲ್ಲಿ ಅಡ್ರಿನಾಲಿನ್ ಅನ್ನು ಬಿಡುಗಡೆ ಮಾಡುತ್ತದೆ.

ಅಂದರೆ, ಈ ಸಂಗೀತವನ್ನು ಕೇಳುತ್ತಿರುವಾಗ ನೀವು ನಿಜಕ್ಕೂ ಒಂದು ಅಷ್ಟೇನೂ ಹಾನಿಕರವಲ್ಲದ ಒತ್ತಡವನ್ನು ಅನುಭವಿಸುತ್ತಿರುತ್ತೀರಿ.

ಹಾಗಾದರೆ, ಇದು ನಮಗೆ ಆನಂದ ನೀಡುವುದು ಏಕೆ?

ಇದು ಹಾರರ್ ಸಿನಿಮಾ ಅಥವಾ ರೋಲರ್ ಕೋಸ್ಟರ್ ರೈಡ್ನಂತೆಯೇ ಕೆಲಸ ಮಾಡುತ್ತದೆ. ನೀವು ಎಂದಾದರೂ ಅವುಗಳನ್ನು ಅನುಭವಿಸಿದ್ದರೆ ನಿಮಗೆ ನಾನು ಹೇಳುವುದು ಅರ್ಥವಾಗಬಹುದು.

ಪಾಶ್ಚಾತ್ಯ ಸಂಗೀತದಲ್ಲೂ ಹಾಗೆಯೇ.

ಸಂಗೀತದ ಕೊನೆಗೆ ಆ ಗೊಂದಲಮಯ ಶಬ್ದಗಳು ನಿಂತು, ಸಂಗೀತವು ಮತ್ತೆ ಹಿತವಾದ ರಾಗಕ್ಕೆ ಅಥವಾ ಸುಂದರವಾದ ಲಯಕ್ಕೆ ಮರಳಿದಾಗ, ನೀವು ಸಂಪೂರ್ಣ ಸುರಕ್ಷಿತವಾಗಿದ್ದೀರಿ ಎಂದು ನಿಮ್ಮ ಮೆದುಳಿಗೆ ಖಚಿತವಾಗುತ್ತದೆ.

ಅದು ನೆಮ್ಮದಿಯ ದೀರ್ಘವಾದ ನಿಟ್ಟುಸಿರು ಬಿಡುತ್ತದೆ.

ಆ "ಸಂಕಟ"ದಿಂದ ಪಾರಾಗಿದ್ದನ್ನು ಸಂಭ್ರಮಿಸಲು, ನಿಮ್ಮ ಮೆದುಳು ನಿಮಗೆ ಧಾರಾಳವಾಗಿ 'ಡೋಪಮೈನ್' ಅನ್ನು ಉಡುಗೊರೆಯಾಗಿ ನೀಡುತ್ತದೆ. ಡೋಪಮೈನ್, ಒಂದು ಸಂತೋಷ ಮತ್ತು ತೃಪ್ತಿಯನ್ನು ನೀಡುವ ರಾಸಾಯನಿಕವಾಗಿದೆ.

ಹಾಗಾಗಿ ನೀವು ತಕ್ಷಣವೇ ಅಪಾರ ಆನಂದವನ್ನು ಅನುಭವಿಸುತ್ತೀರಿ.

ಆದರೆ ಗಮನಿಸಿ, ಇಲ್ಲಿ ಒಂದು ತೊಂದರೆಯಿದೆ : ಈ ಸಂತೋಷವು ಒಂದು ವ್ಯವಹಾರದ ತರಹ.

ನಂತರ ಸಿಗುವ ನೆಮ್ಮದಿಯನ್ನು ಅನುಭವಿಸುವುದಕ್ಕಾಗಿ, ನೀವು ಮೊದಲು ಒತ್ತಡ ಮತ್ತು ಆತಂಕದ ರೂಪದಲ್ಲಿ ತೆರಿಗೆ ಪಾವತಿಸಬೇಕಾಗುತ್ತದೆ!

ಇದಾಯಿತು, ಪಾಶ್ಚಾತ್ಯ ಸಂಗೀತದ ರೀತಿ. ಭಾರತೀಯ ಸಂಗೀತದ ರೀತಿ ಹೇಗೆ?

ಭಾರತೀಯ ಶಾಸ್ತ್ರೀಯಸಂಗೀತವು ಸಂಪೂರ್ಣವಾಗಿ ಭಿನ್ನವಾದ ಹಾದಿಯನ್ನು ಆಯ್ದುಕೊಳ್ಳುತ್ತದೆ.

ಅದು ಈ ಒತ್ತಡ ಮತ್ತು ಬಿಡುಗಡೆಯ ಚಕ್ರವನ್ನು ಸಂಪೂರ್ಣವಾಗಿ ಬದಿಗೊತ್ತುತ್ತದೆ.

ನಿಮ್ಮನ್ನು ನೆಮ್ಮದಿಯ ಸ್ಥಿತಿಯಿಂದ ದೂರ ತಳ್ಳಲು ಅದು ಬದಲಾಗುವ ಕಾರ್ಡ್ಸ್ ಅಥವಾ ಕರ್ಕಶ ಸ್ವರಗಳನ್ನು ಬಳಸುವುದಿಲ್ಲ.

ಬದಲಿಗೆ, ಅದು ತಂಬೂರಿಯಂತಹ ನಿರಂತರ ಹಿನ್ನೆಲೆ ಶ್ರುತಿಯ ಮೂಲಕ ಮೊದಲ ಕ್ಷಣದಿಂದಲೇ ನಿಮ್ಮನ್ನು ಪ್ರಶಾಂತತೆಯಲ್ಲಿ ಹಿಡಿದಿಡುತ್ತದೆ.

ಭಾರತೀಯ ಶಾಸ್ತ್ರೀಯ ಸಂಗೀತವು ಇಷ್ಟೊಂದು ಹಿತವೆನಿಸಲು ಮೂಲ ಕಾರಣವೇನೆಂದರೆ, ಅದು ಪ್ರಕೃತಿಯ ಸರಳ ನಿಯಮವನ್ನು ಪಾಲಿಸುತ್ತದೆ: ಎಲ್ಲವನ್ನೂ ಯಾವುದೇ ಹಠಾತ್ ಬದಲಾವಣೆಗಳಿಲ್ಲದೆ, ಅನುಕ್ರಮವಾಗಿ ಬದಲಾಗುವಂತೆ ಅದು ನೋಡಿಕೊಳ್ಳುತ್ತದೆ.

ಅದು ಮೂರು ವಿಭಿನ್ನ ವಿಧಾನಗಳಲ್ಲಿ ನಿಮ್ಮ ಮೆದುಳನ್ನು ಒತ್ತಡದಿಂದ ರಕ್ಷಿಸುತ್ತದೆ:

• ಹಿತವಾದ ಸ್ವರಗಳು : ಪಾಶ್ಚಾತ್ಯ ಸಂಗೀತದಲ್ಲಿ ಒಂದು ಸ್ವರದಿಂದ ಇನ್ನೊಂದು ಸ್ವರಕ್ಕೆ ಚಲಿಸುವುದು ಮೆಟ್ಟಿಲುಗಳನ್ನು ಹತ್ತಿದಂತೆ - ನೀವು ಒಂದು ಬ್ಲಾಕ್ನಿಂದ ಮತ್ತೊಂದಕ್ಕೆ ಹೆಜ್ಜೆ ಇಡುತ್ತೀರಿ.

ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ಸ್ವರಗಳು ಜಾರುಬಂಡಿಯಂತೆ ಇರುತ್ತವೆ. ಶಬ್ದಗಳು ಒಂದು ಸ್ವರದಿಂದ ಮತ್ತೊಂದು ಸ್ವರಕ್ಕೆ ಯಾವುದೇ ಅಡೆತಡೆಯಿಲ್ಲದೆ ಸರಾಗವಾಗಿ ಸಾಗುತ್ತವೆ. ಸ್ವರಗಳ ನಡುವಿನ ಅನಂತ ಸೂಕ್ಷ್ಮ ವಿಸ್ತಾರವನ್ನು ಇವು ಅನ್ವೇಷಿಸುತ್ತವೆ.

ಅಲ್ಲಿ ಯಾವುದೇ ತೀಕ್ಷ್ಣವಾದ ತಿರುವುಗಳಿಲ್ಲದ ಕಾರಣ, ಮೆದುಳಿಗೆ ಯಾವುದೇ ರೀತಿಯ ಆಘಾತ ಎದುರಾಗುವುದಿಲ್ಲ.

• ಧ್ವನಿಯ ಹಿತವಾದ ತೀವ್ರತೆ : ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ನಿಮ್ಮನ್ನು ಬೆಚ್ಚಿಬೀಳಿಸುವಂತಹ ಹಠಾತ್, ಜೋರಾದ ಶಬ್ದಗಳ ಸ್ಫೋಟ ಇರುವುದಿಲ್ಲ.

ಬದಲಿಗೆ, ಧ್ವನಿಯ ಏರಿಳಿತಗಳು ಮೃದುವಾದ ಅಲೆಗಳಂತೆ ಇರುತ್ತವೆ.

ಶಾಂತವಾದ ಸಮುದ್ರದ ಅಲೆಯಂತೆ ಧ್ವನಿಯು ಏರುತ್ತಾ, ಇಳಿಯುತ್ತಾ ಸಾಗುತ್ತದೆ. ಇದರಿಂದ ನಿಮ್ಮ ಕಿವಿಗಳಿಗೆ ಧ್ವನಿಯ ತೀವ್ರತೆಯನ್ನು ಸುಲಭವಾಗಿ ಊಹಿಸಲು ಸಾಧ್ಯವಾಗುತ್ತದೆ ಮತ್ತು ನೀವು ಎಂದಿಗೂ ಬೆಚ್ಚಿಬೀಳುವುದಿಲ್ಲ.

• ಮೃದುವಾದ ವೇಗ : ಭಾರತೀಯ ಶಾಸ್ತ್ರೀಯ ಸಂಗೀತದ ಲಯಗಳು ಅತ್ಯಂತ ಸಂಕೀರ್ಣವಾಗಿದ್ದರೂ ಸಹ, ವೇಗದ ಬದಲಾವಣೆಗಳು ಒಂದು ಸರಳ ರೇಖೆಯಲ್ಲೇ ಸಾಗುತ್ತವೆ.

ಸಂಗೀತವು ನಿಧಾನಗತಿಯಿಂದ ತೀವ್ರಗತಿಗೆ ಬದಲಾಗುವಾಗ, ರೈಲು ಗಾಡಿಯು ನಿಧಾನವಾಗಿ ವೇಗವನ್ನು ಪಡೆದುಕೊಳ್ಳುವಂತೆ ಕ್ರಮೇಣವಾಗಿ ಹೆಚ್ಚಾಗುತ್ತದೆ.

ಯಾವುದೇ ಹಠಾತ್ ಅಥವಾ ತೀವ್ರ ಬದಲಾವಣೆಗಳಿಲ್ಲದೆ, ನಿಮ್ಮ ಹೃದಯ ಬಡಿತ ಮತ್ತು ಉಸಿರಾಟವು ಆ ಲಯಕ್ಕೆ ಸುಲಭವಾಗಿ ಒಗ್ಗಿಕೊಳ್ಳುತ್ತವೆ.

ಎಲ್ಲವೂ ಇಷ್ಟು ಮೃದುವಾಗಿ ಸಾಗುವುದರಿಂದ, ನಿಮ್ಮ ಮೆದುಳಿನ ಆತ್ಮರಕ್ಷಣೆಯ ಎಚ್ಚರಿಕಾ ವ್ಯವಸ್ಥೆ ಸಂಪೂರ್ಣವಾಗಿ ಆಫ್ ಆಗಿರುತ್ತದೆ.

ನಿಮ್ಮ ದೇಹವು ನಿಧಾನವಾಗಿ ಸಡಿಲಗೊಳ್ಳುತ್ತದೆ ಮತ್ತು ಅಡ್ರಿನಾಲಿನ್ ಕಿಚ್ಚಿನ ಅಗತ್ಯವೇ ಇಲ್ಲದ ನಿಮ್ಮ ಮೆದುಳು 'ಸೆರೊಟೋನಿನ್' ಅನ್ನು ಬಿಡುಗಡೆ ಮಾಡುತ್ತದೆ. ಸೆರೊಟೋನಿನ್ ಒಂದು ಶಾಂತತೆ, ಸ್ಥಿರತೆ ಮತ್ತು ತೃಪ್ತಿಯನ್ನು ನೀಡುವ ರಾಸಾಯನಿಕವಾಗಿದೆ.

ಈಗ ನೀವು ಕೇಳಬಹುದು: ಒತ್ತಡವನ್ನು ತಡೆಯಲು ಮೃದುವಾದ, ನಿಧಾನವಾಗಿ ಬದಲಾಗುವ ಶಬ್ದಗಳೇ ಸಾಕು ಎಂದಾದರೆ, ನಾವು ಕೇವಲ ಒಂದು ಟ್ಯೂನಿಂಗ್ ಫೋರ್ಕ್ ಅಥವಾ ನಿರಂತರವಾಗಿ ಸೂಸುವ ಎಲೆಕ್ಟ್ರಾನಿಕ್ ಹಮ್ ಶಬ್ದವನ್ನು ಕೇಳಿ ಸಂತೋಷಪಡಬಹುದಲ್ಲವೇ? ಭಾರತೀಯ ಸಂಗೀತವೇ ಏಕೆ?

ತಮಾಷೆಯೆಂದರೆ ಮಾನವನ ಮೆದುಳು ಸದಾ ಕಲಿಯುತ್ತಾ ಇರಬಯಸುವ ಒಂದು ಯಂತ್ರ. ಅದಕ್ಕೆ ಅತಿ ಬೇಗ ಬೇಸರ ಬರುತ್ತದೆ.

ಟ್ಯೂನಿಂಗ್ ಫೋರ್ಕ್ನಂತಹ ಯಾವುದೇ ಬದಲಾವಣೆಯಿಲ್ಲದ ಒಂದೇ ರೀತಿಯ ಶಬ್ದವನ್ನು ಅದಕ್ಕೆ ನೀಡಿದರೆ, ಅದು ಅದನ್ನು ತಕ್ಷಣವೇ ಗ್ರಹಿಸಿ, ಅಲ್ಲಿ ಕಲಿಯಲು ಹೊಸದೇನೂ ಇಲ್ಲ ಎಂದು ತಿಳಿದು, ಅದನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತದೆ.

ಅಂತಹ ಸ್ಥಿರವಾದ ಶಬ್ದವು ನಿಮಗೆ ಸಂತೋಷವನ್ನು ನೀಡುವುದಿಲ್ಲ; ಬದಲಿಗೆ ನಿಮ್ಮ ಮೆದುಳನ್ನು ದಣಿಸಿ ಬೇಸರ ತರಿಸುತ್ತದೆ.

ಇಲ್ಲಿಯೇ ಭಾರತೀಯ ಶಾಸ್ತ್ರೀಯ ಸಂಗೀತದ ಜಾಣ್ಮೆ ಅಡಗಿದೆ.

ಮನೋಧರ್ಮ ಸಂಗೀತದ ಮೂಲಕ, ಭಾರತೀಯ ಶಾಸ್ತ್ರೀಯ ಸಂಗೀತಗಾರನು ನಿಮ್ಮ ಮೆದುಳು ಕಲಿಯಲು ಪ್ರತಿ ಬಾರಿಯೂ ಸಂಪೂರ್ಣವಾಗಿ ಹೊಸದನ್ನೇ ಸೃಷ್ಟಿಸುತ್ತಿರುತ್ತಾನೆ.

ರಾಗವು ಸದಾ ವಿಕಸನಗೊಳ್ಳುತ್ತಾ, ಹೊಸ ಹಾದಿಗಳನ್ನು ಮತ್ತು ಸುಂದರವಾದ ಅಭಿವ್ಯಕ್ತಿಗಳನ್ನು ಪರಿಚಯಿಸುತ್ತದೆ.

ಆದಾಗ್ಯೂ, ಇಲ್ಲಿನ ಸುವರ್ಣ ನಿಯಮವೊಂದೇ: ಪ್ರತಿ ಹೊಸ ಮಾಹಿತಿಯನ್ನೂ ಸಹ ಅತ್ಯಂತ ಮೃದುವಾಗಿಯೇ ಪ್ರಸ್ತುತಪಡಿಸಬೇಕು.

ಯಾವುದೇ ಹಠಾತ್ ಶಬ್ದದ ಆಘಾತ ತಟ್ಟದ ಕಾರಣ, ನಿಮ್ಮ ಮೆದುಳು ಯಾವುದೇ ದೈಹಿಕ ಒತ್ತಡವಿಲ್ಲದೆ ಸಂಪೂರ್ಣ ಪ್ರಶಾಂತತೆಯಲ್ಲೇ ಇರುತ್ತದೆ, ಆದರೂ ಅದು ಸದಾ ಜಾಗೃತವಾಗಿದ್ದು, ಆಳವಾದ ಆಸಕ್ತಿಯಿಂದ ಹೊಸದನ್ನು ಕಲಿಯುತ್ತಿರುತ್ತದೆ.

ಅಂತಿಮವಾಗಿ ಹೇಳುವುದಾದರೆ, ಈ ಎರಡು ಸಂಗೀತ ಪದ್ಧತಿಗಳು ನಿಮ್ಮ ಮನಸ್ಸಿಗೆ ಎರಡು ವಿಭಿನ್ನ ಜೀವನಶೈಲಿಗಳನ್ನು ನೀಡುತ್ತವೆ.

ಪಾಶ್ಚಾತ್ಯ ಸಂಗೀತವು ಸಂತೋಷವನ್ನು ಒಂದು ಒಪ್ಪಂದದಂತೆ ನೋಡುತ್ತದೆ: ಬದುಕುಳಿದೆ ಎಂಬ ತೀವ್ರ ಆನಂದವನ್ನು ಸವಿಯುವ ಮೊದಲು ಅದು ನಿಮ್ಮ ದೇಹವನ್ನು ಒಂದು ಕೃತಕ ತಾತ್ಕಾಲಿಕ ಅಪಾಯದ ಸ್ಥಿತಿಗೆ ತಳ್ಳುತ್ತದೆ.

ಭಾರತೀಯ ಶಾಸ್ತ್ರೀಯ ಸಂಗೀತವು ಸಂತೋಷವನ್ನು ಒಂದು ನಿರಂತರ ಪವಿತ್ರ ಆಶ್ರಯತಾಣದಂತೆ ನೋಡುತ್ತದೆ.

ಅದು ನಿಮ್ಮ ಕಲಿಯುವ ಮನಸ್ಸಿಗೆ ಅನ್ವೇಷಿಸಲು ಅಸಂಖ್ಯಾತ ಹೊಸ ಮಾದರಿಗಳನ್ನು ನೀಡುತ್ತದೆ, ಆದರೆ ಅವುಗಳನ್ನು ಎಷ್ಟು ಪರಿಪೂರ್ಣವಾಗಿ ಮತ್ತು ಮೃದುವಾಗಿ ಮೂಡಿಸುತ್ತದೆ ಎಂದರೆ ನಿಮ್ಮ ದೇಹವು ಯಾವುದೇ ಒತ್ತಡದ ಬೆಲೆಯನ್ನು ತೆರಬೇಕಾಗಿ ಬರುವುದಿಲ್ಲ.

ನಿಮ್ಮ ಅಭಿಪ್ರಾಯೇನು ಎಂದು ನನಗೆ ತಿಳಿಸಿ. ನನ್ನ ವಿಶ್ಲೇಷಣೆ ನಿಮಗೆ ಅರ್ಥಪೂರ್ಣ ಎನಿಸುತ್ತದೆಯೆ?
 
 --------------------------------------------------------------------

ಇದು ನಿಮಗೆ ಇಷ್ಟವಾಗಿದ್ದರೆ, ನನ್ನ ಸಾಪ್ತಾಹಿಕ ಓದುಗರೊಂದಿಗೆ ಸೇರಲು ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇನೆ. ಪ್ರತಿ ಶನಿವಾರ, ಮೇಲ್ಮೈಯನ್ನು ಮೀರಿದ ಮತ್ತು ನಿಜವಾಗಿಯೂ ಮುಖ್ಯವಾದ ಪ್ರಶ್ನೆಗಳನ್ನು ಪರಿಹರಿಸುವ ಆಳವಾದ ವಿಶ್ಲೇಷಣೆಯನ್ನು ನಾನು ಪ್ರಕಟಿಸುತ್ತೇನೆ. ಪೇವಾಲ್‌ಗಳಿಲ್ಲ, ಕ್ಲಿಕ್‌ಬೈಟ್ ಇಲ್ಲ - ಕೇವಲ ನೇರ ವಿನಿಮಯ: ನನ್ನ ಮನಸ್ಸಿನಿಂದ ನಿಮ್ಮದಕ್ಕೆ. ಚಂದಾದಾರರಾಗಲು ಇಲ್ಲಿ ಕ್ಲಿಕ್ ಮಾಡಿ. 
 
© Dr. King, Swami Satyapriya 2026

No comments:

Post a Comment