ಒಂದು ವಿಷಯವನ್ನು ಸರಿಯಾಗಿ ತಿಳಿದುಕೊಳ್ಳುವುದು, ಕೇವಲ ಜ್ಞಾನವನ್ನು ಸಂಪಾದಿಸುವ ಸಂದರ್ಭದಲ್ಲಿ ಮಾತ್ರವಲ್ಲ, ನಮ್ಮನ್ನು ಹಾದಿತಪ್ಪಿಸುವ ಅದೆಷ್ಟೋ ಪ್ರಯತ್ನಗಳಿಂದ ರಕ್ಷಿಸಿಕೊಳ್ಳುವುದರಲ್ಲೂ ಸಹಾಯಕವಾಗುತ್ತದೆ.
ಇಂದಿನ ಸಾಮಾಜಿಕ ಮಾಧ್ಯಮಗಳು ಅದೆಷ್ಟೋ ಭಾರಿ, ತಪ್ಪುದಾರಿಗೆಳೆಯುವ ಹೇಳಿಕೆಗಳಿಂದ, ಅರ್ಧಸತ್ಯಗಳಿಂದ, ಮತ್ತು ಕೆಲವೊಮ್ಮೆ ಅರ್ಥವಿಲ್ಲದ ಮಾತುಗಳಿಂದ ತುಂಬಿರುತ್ತವೆ. ಅವು ದುರುದ್ದೇಶಪೂರಿತವೂ ಆಗಿರಬಹುದು, ಅಥವಾ ಬರಿದೇ ಗಮನ ಸೆಳೆಯುವ ಪ್ರಯತ್ನಗಳಾಗಿರಬಹುದು. ಅದೆಂತಿದ್ದರೂ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು ಮುಖ್ಯವಾಗುತ್ತದೆ.
ಈ ಸನ್ನಿವೇಶದಲ್ಲಿ, ಇವತ್ತು ನಾನು ಒಂದು ಬಹಳ ಮುಖ್ಯವಾದ ಪ್ರಶ್ನೆಯನ್ನು ನಿಮ್ಮೊಂದಿಗೆ ಚರ್ಚಿಸಲು ಬಯಸುತ್ತೇನೆ.
ನಾವು ಯಾವುದನ್ನಾದರೂ ಹೇಗೆ ಅರ್ಥಮಾಡಿಕೊಳ್ಳುತ್ತೇವೆ ಎಂಬ ವಿಷಯದ ಬಗೆಗೆ ಎಂದಾದರೂ ವಿಶ್ಲೇಷಿಸಿದ್ದೀರಾ? ಇನ್ನೂ ಮುಖ್ಯವಾಗಿ, ಸರಿಯಾಗಿ ಗ್ರಹಿಸುವಲ್ಲಿ ನಾವು ಕೆಲವೊಮ್ಮೆ ಏಕೆ ಎಡವುತ್ತೇವೆ? ಸ್ವಲ್ಪ ಯೋಚಿಸಿ ನೋಡಿ.
ಈ ವಿಷಯದ ಬಗೆಗೆ ವಿಶ್ಲೇಷಿಸಲು ನಾನು ಒಂದು ಸರಳ ಉದಾಹರಣೆಯನ್ನು ಎತ್ತಿಕೊಳ್ಳುತ್ತೇನೆ. ಈ ಉದಾಹರಣೆ ಕೇವಲ ಚರ್ಚೆಯ ಉದ್ದೇಶಕ್ಕಷ್ಟೇ. ಇಲ್ಲಿ ನಾನು ಉಲ್ಲೇಖಿಸುವ ವ್ಯಕ್ತಿಯನ್ನು ಹೀಗಳೆಯುವುದು ಖಂಡಿತವಾಗಿಯೂ ನನ್ನ ಉದ್ದೇಶವಲ್ಲ.
ಒಬ್ಬ ಬಹಳ ಪ್ರಸಿದ್ಧ ಗುರು ಇದ್ದಾರೆ. ಲಕ್ಷಾಂತರ ಅನುಯಾಯಿಗಳು ಅವರ ಪ್ರತಿಯೊಂದು ಮಾತನ್ನೂ ವೇದವಾಕ್ಯವೆಂಬಂತೆ ಕಣ್ಣುಮುಚ್ಚಿ ನಂಬುತ್ತಾರೆ.
ಆದರೆ ಗಮನದಿಂದ ಯೋಚಿಸಿದರೆ, ಈ ವ್ಯಕ್ತಿ ಮಾಡುವ ಅದೆಷ್ಟೋ ಹೇಳಿಕೆಗಳು ಅರ್ಥಹೀನವಾಗಿವೆ, ದಾರಿತಪ್ಪಿಸುವಂತಿವೆ. ಆದರೂ, ಅವರ ಅನುಯಾಯಿಗಳು ಅವರ "ಮಹಾನ್ ಜ್ಞಾನ"ವನ್ನು ಪ್ರಶಂಸಿಸುತ್ತಾರೆ. ವಾಸ್ತವವಾಗಿ, ಅವರ ಇಂತಹ ಅಸಂಬದ್ಧ ಹೇಳಿಕೆಗಳಿಂದಲೇ ಹಲವರು ಅವರತ್ತ ಆಕರ್ಷಿತರಾಗುತ್ತಾರೆ.
ಒಂದು ಬಹುಚರ್ಚಿತ ಉದಾಹರಣೆ ಕೊಡುತ್ತೇನೆ.
ಅದರಲ್ಲಿ ಈ ಗುರು, ಚಂದ್ರಗ್ರಹಣದ ಸಮಯದಲ್ಲಿ, ಬೇಯಿಸಿದ ಆಹಾರವನ್ನು ಯಾಕೆ ತಿನ್ನಬಾರದು ಎಂದು ವಿವರಿಸುತ್ತಾರೆ. ಇದೊಂದು ವ್ಯಾಪಕವಾಗಿ ಹರಡಿರುವ ಪ್ರಾಚೀನ ಭಾರತೀಯ ನಂಬುಗೆ. ಶತಮಾನಗಳ ಹಿಂದೆಯೇ ಪ್ರಖ್ಯಾತ ಭಾರತೀಯ ಖಗೋಳಶಾಸ್ತ್ರಿಯಾದ ಆರ್ಯಭಟನು ಈ ನಂಬುಗೆಗಳನ್ನು ಖಂಡಿಸಿದ್ಧರೂ, ಇಂದಿಗೂ ಬಹುತೇಕ ಭಾರತೀಯರು ಅಂತಹ ತಪ್ಪು ಕಲ್ಪನೆಗಳನ್ನು ಹೊಂದಿದ್ದಾರೆ.
ಒಬ್ಬ ಗುರು ತನ್ನ ಅನುಯಾಯಿಗಳನ್ನು ತಪ್ಪು ಕಲ್ಪನೆಗಳಿಂದ ಮೇಲೆತ್ತಬೇಕು. ಅದು ಅವರ ಕರ್ತವ್ಯವೂ ಕೂಡಾ. ಆದರೂ ಅದೇಕೋ ಈ ಗುರು ಮಾತ್ರ ಜನರನ್ನು ಇನ್ನೂ ಆಳವಾಗಿ ತಪ್ಪುದಾರಿಯಲ್ಲಿ ತಳ್ಳುತ್ತಾರೆ. ಬಹಳ ವೈಜ್ಞಾನಿಕವೆಂಬಂತೆ, ತರ್ಕಬದ್ಧವಾಗಿ, ಪ್ರಾಯೋಗಾತ್ಮಕವಾಗಿ ಅದೇ ಹಳೆಯ ನಂಬುಗೆಯನ್ನು ಪ್ರತಿಪಾದಿಸುತ್ತಾರೆ.
ಅವರ ಪ್ರಕಾರ, ಗ್ರಹಣದ ಸಮಯದಲ್ಲಿ ಚಂದ್ರನು ತನ್ನ ಎಲ್ಲಾ ಕಲೆಗಳನ್ನು ಬಹಳ ವೇಗವಾಗಿ ದಾಟುತ್ತಾನೆ. ಸಾಮಾನ್ಯವಾಗಿ, ಅಷ್ಟು ಕಲೆಗಳನ್ನು ದಾಟಲು ಚಂದ್ರನಿಗೆ ಹದಿನೈದು ದಿನಗಳೇ ಬೇಕಾಗುತ್ತವೆ. ಅಂದರೆ ಗ್ರಹಣದ ಕೆಲವೇ ಘಂಟೆಗಳು 15 ದಿನಕ್ಕೆ ಸಮಾನ. ಹಾಗಾಗಿ, ಆ ಸಮಯದಲ್ಲಿ ಬೇಯಿಸಿದ ಆಹಾರವನ್ನು ಇಟ್ಟರೆ, ಅದು ಕೆಡುತ್ತದೆ. ಏಕೆಂದರೆ ನೀವು ಅದನ್ನು 15 ದಿನ ಇಟ್ಟಂತಾಗುತ್ತದೆ. ಇದು ಅವರ ತರ್ಕ.
ಬರೇ ತರ್ಕದಿಂದ ನಿಮಗೆ ಮನವರಿಕೆಯಾಗದಿದ್ದರೆ, ಪ್ರಾಯೋಗಿಕವಾಗಿಯೂ ಅದನ್ನು ಅವರು ಸಿದ್ಧಪಡಿಸುತ್ತಾರೆ.
ಅವರು ಆಹಾರದ ಮೇಲೆ ಒಂದು ಜಪಮಾಲೆಯನ್ನು ತೂಗಿಸುತ್ತಾರೆ. ಗ್ರಹಣದ ಮುಂಚೆ ಪ್ರದಕ್ಷಿಣಾಕಾರವಾಗಿ ತಿರುಗುತ್ತಿದ್ದ ಆ ಜಪಮಾಲೆ, ಗ್ರಹಣ ಪ್ರಾರಂಭವಾದೊಡನೆಯೇ, ತನ್ನಷ್ಟಕ್ಕೆ, ವಿರುದ್ಧದಿಕ್ಕಿನಲ್ಲಿ ತಿರುಗತೊಡಗುವುದರೆಡೆಗೆ ನಿಮ್ಮ ಗಮನ ಸೆಳೆಯುತ್ತಾರೆ! ಅವರ ಪ್ರಕಾರ, ಇದು ಆಹಾರ ಕೆಡುತ್ತಿದೆ ಎಂದು ಸೂಚಿಸುತ್ತದೆ.
ನಾನು, ಬಹಳ ಶೈಕ್ಷಣಿಕ ಅರ್ಹತೆ ಹೊಂದಿರುವವರನ್ನೂ, ಈ ತರ್ಕ ಮತ್ತು ಪ್ರಯೋಗಾತ್ಮಕ ವಿವರಣೆಗಳಿಂದ ಪ್ರಭಾವಿತರಾಗುವುದನ್ನು ನೋಡಿದ್ದೇನೆ. ಅವರ ಮಟ್ಟಿಗೆ ಆ ಗುರು ಹೇಳುವುದು ಅಕ್ಷರಶಃ ನಿಜ!
ಆದರೂ, ಸ್ವಲ್ಪ ಯೋಚಿಸಿ ನೋಡಿದರೆ ನಿಮಗೆ ನಿಜವೇನೆಂದು ತಿಳಿಯುತ್ತದೆ.
ಚಂದ್ರನ ಕಲೆಗಳು ಕಾಲವನ್ನು ನಿಯಂತ್ರಿಸುವುದಿಲ್ಲ. ಕಾಲವೇ ಚಂದ್ರನ ಕಲೆಗಳನ್ನು ನಿರ್ಧರಿಸುತ್ತದೆ. ಹಾಗಾಗಿ ಆ ತರ್ಕ ಅಸಂಬದ್ಧ.
ಇನ್ನು, ಆ ತಿರುಗುತ್ತಿರುವ ಜಪಮಾಲೆ?
ಅದು ಐಡಿಯೋಮೋಟರ್ ಕ್ರಿಯೆ ಎಂದು ಕರೆಯಲ್ಪಡುವ ಒಂದು ಬಹು ಖ್ಯಾತ ಘಟನೆ. ನೀವು ನೋಡಿರಬಹುದಾದ ಓಯಿಜಾ ಬೋರ್ಡ್-ಗಳನ್ನು ಉಪಯೋಗಿಸಿ ಮಾಡುವ ಪ್ರೇತ ಸಂಭಾಷಣೆ, ಅಥವಾ ಒಂದು pendulum ಅನ್ನು ಹಿಡಿದುಕೊಂಡು ಭೂಮಿಯಾಳದಲ್ಲಿರಬಹುದಾದ ನೀರಿನ ಗುರುತಿಸುವಿಕೆ (water divining) ಹಿಂದೆ ಇರುವ ಪರಿಣಾಮ ಅದೇ. ಅಲ್ಲಿ ಒಬ್ಬ ವ್ಯಕ್ತಿ ತನಗರಿವಿಲ್ಲದೇ ಚಲನೆಯನ್ನು ಉಂಟುಮಾಡುತ್ತಾನೆ.
ಇದನ್ನೆಲ್ಲ ಮಾಡುವುದರಲ್ಲಿ ಈ ಗುರುವಿನ ಯಾವ ಸ್ವಾರ್ಥವಿದೆ? ಅದೇ ಒಂದು ಪ್ರತ್ಯೇಕ ವಿಷಯ. ಅದು ಇಲ್ಲಿ ಅಪ್ರಸ್ತುತ.
ಅದೆಂತಿದ್ದರೂ, ಅನೇಕರು ಇಂತಹುದನ್ನು ನಂಬುತ್ತಾರೆ. ಯಾಕೆ ಎಂಬುದೇ ಮುಖ್ಯ ಪ್ರಶ್ನೆ.
ಇದು ನಮ್ಮನ್ನು ಮೂಲ ಪ್ರಶ್ನೆಗೆ ಕರೆದೊಯ್ಯುತ್ತದೆ: ನಾವು ವಿಷಯಗಳನ್ನು ಹೇಗೆ ವಿಶ್ಲೇಷಿಸುತ್ತೇವೆ? ಹೊಸ ವಿಷಯವೊಂದು ನಮ್ಮ ಗಮನಕ್ಕೆ ಬಂದಾಗ ನಮ್ಮ ಮೆದುಳು ಹೇಗೆ ವರ್ತಿಸುತ್ತದೆ?
ನಮ್ಮ ಮೆದುಳು ತಕ್ಷಣವೇ ನಾವು ಹಿಂದೆ ನೋಡಿದ ಅಥವಾ ಕೇಳಿದ ಯಾವುದಾದರೂ ಅಂತಹುದೇ ವಿಷಯವನ್ನು ಹುಡುಕಲು ಆರಂಭಿಸುತ್ತದೆ. ಅದನ್ನು ಹೋಲುವ ಅದೆಷ್ಟೋ ವಿಷಯಗಳು ನಮ್ಮ ಸ್ಮರಣೆಯಲ್ಲಿರಬಹುದು. ಅವುಗಳ ಪೈಕಿ ತುಂಬಾ ಹೋಲಿಕೆಯಿರುವ ವಿಷಯವೊಂದಿದ್ದರೆ ಅದನ್ನೇ ನಮ್ಮ ಮೆದುಳು ಆಯ್ಕೆ ಮಾಡುತ್ತದೆ.
ಒಂದು ವೇಳೆ ಅಂತಹ ವಿಷಯ ಸಿಕ್ಕರೆ, "ನಾವು ಅರ್ಥಮಾಡಿಕೊಂಡೆವು" ಎಂದು ನಮಗೆ ಭಾಸವಾಗುತ್ತದೆ.
ಸ್ಪಷ್ಟ ಹೊಂದಾಣಿಕೆ ಸಿಗದಿದ್ದರೆ, ಕೆಲವರು "ಇದು ನನಗೆ ಅರ್ಥವಾಗಲಿಲ್ಲ" ಎಂದು ಹೇಳಿ ಕೈಚೆಲ್ಲುತ್ತಾರೆ. ಆದರೆ ಬಹಳಷ್ಟು ಜನರು, ಅದನ್ನು ಸ್ವಲ್ಪಮಟ್ಟಿಗೆ ಹೋಲುವ ಹಳೆಯ ಸ್ಮರಣೆಗಳನ್ನೇ ಇದೆಂದು ತಪ್ಪಾಗಿ ತಿಳಿಯುತ್ತಾರೆ. ಅಲ್ಲಿಗೆ ಅವರ ಗ್ರಹಿಕೆ ತಪ್ಪಾಗುತ್ತದೆ.
ನಮ್ಮಲ್ಲಿ ಕೆಲವು ಜಾಣರು ಸ್ವಲ್ಪ ಮುಂದೆ ಹೋಗುತ್ತಾರೆ.
ಅವರು ಆ ವಿಷಯವನ್ನು ಚಿಕ್ಕ ಭಾಗಗಳಾಗಿ ವಿಭಜಿಸಿ, ಪ್ರತೀ ಭಾಗವನ್ನು ಪ್ರತ್ಯೇಕವಾಗಿ ಹೊಂದಿಸಲು ಪ್ರಯತ್ನಿಸುತ್ತಾರೆ.
ಎಲ್ಲವೂ ಹೆಚ್ಚುಕಮ್ಮಿ ಹೊಂದಿಕೆಯಾಗುತ್ತದೆ ಎಂದು ಅನಿಸಿದಾಗ, ಅವರು, "ಹೌದು, ಅರ್ಥವಾಯಿತು" ಎಂದು ಹೇಳುತ್ತಾರೆ. ಇದೇ ಸರಿಯಾದ ಮಾರ್ಗ.
ಆದರೆ ಈ ಪ್ರಕ್ರಿಯೆಯಲ್ಲಿ ಸಮಸ್ಯೆಗಳಿವೆ.
ಕೆಲವೊಮ್ಮೆ ನಾವು ತುಂಬಾ ಬೇಗ ನಮ್ಮ ಹುಡುಕಾಟವನ್ನು ನಿಲ್ಲಿಸುತ್ತೇವೆ. ಅದಕ್ಕೆ ಕಾರಣಗಳು ಹಲವಿರಬಹುದು.
ಕೆಲವೊಮ್ಮೆ ಆ ಕ್ಷೇತ್ರದಲ್ಲಿ ನಮ್ಮ ಬಳಿ ಸಾಕಷ್ಟು ಪೂರ್ವ ಜ್ಞಾನವಿರುವುದಿಲ್ಲ. ಬಹಳ ಬುದ್ಧಿವಂತರಾದವರೂ ಸಹ ಹೊಸ ವಿಷಯದಲ್ಲಿ ಸಂಪೂರ್ಣ ಅಜ್ಞರಾಗಿರಬಹುದು. ನಮ್ಮಲ್ಲಿ ಅದೆಷ್ಟೋ ಜನರಿಗೆ ideomotor effect ನ ಬಗೆಗೆ ತಿಳಿದಿಲ್ಲದಿರಬಹುದು.
ಇನ್ನೂ ಒಂದು ಸಮಸ್ಯೆ ಇದೆ.
ನಾವು ಹೋಲಿಕೆಯಿರುವ ಪೂರ್ವ ಸ್ಮರಣೆಗಳನ್ನು ಹುಡುಕುವಾಗ, ನಮ್ಮ ಸ್ಮೃತಿಯಲ್ಲಿ ತುಸುಮಟ್ಟಿಗೆ ಹೋಲುವ ಅದೆಷ್ಟೋ ಘಟನೆಗಳು ಸಿಗಬಹುದು. ಆಗ ನಮಗೆ ಅವುಗಳಲ್ಲಿ ಕೆಲವನ್ನು ಆಯ್ಕೆ ಮಾಡಬೇಕಾಗುತ್ತದೆ. ಸರಿಯಾಗಿ ಆಯ್ಕೆ ಮಾಡುವ ವಿಧಾನವೇನು?
- ನಾವು ಮಾಡುವ ಆಯ್ಕೆ ವಸ್ತು ನಿಷ್ಠವಾಗಿರಬೇಕು.
- ಅವು ಪರಸ್ಪರ ವೈರುಧ್ಯವಿಲ್ಲದೆ, ಒಂದಕ್ಕೊಂದು ಹೊಂದುವಂತಿರಬೇಕು.
- ಹಾಗೆ ಮಾಡಿದ ಆಯ್ಕೆಗಳು ತರ್ಕಬದ್ಧವಾಗಿರಬೇಕು.
ಇಲ್ಲೇ ನಾವು ಎಡವುತ್ತೇವೆ. ಅದ್ಯಾಕೋ ನಾವು ವಸ್ತು ನಿಷ್ಠತೆಗೆ ಬದಲಾಗಿ ವ್ಯಕ್ತಿನಿಷ್ಠತೆಗೇ ಹೆಚ್ಚು ಒತ್ತು ನೀಡುತ್ತೇವೆ. ತರ್ಕದ ಬದಲಿಗೆ ನಂಬುಗೆಗೇ ಶರಣಾಗುತ್ತೇವೆ. ನಮ್ಮ ಸ್ವ-ನಿರ್ಣಯಕ್ಕಿಂತ ಬೇರೆಯವರ ಅಭಿಪ್ರಾಯಕ್ಕೇ ಹೆಚ್ಚು ಮಹತ್ವ ನೀಡುತ್ತೇವೆ.
ಆ ಗುರು, ಅತಿ ಆತ್ಮವಿಶ್ವಾಸದಿಂದ ಅಧಿಕಾರಯುತವಾಗಿ ಮಾಡಿದಹೇಳಿಕೆಗಳು ಹೆಚ್ಚು ಸರಿಯೆಂಬಂತೆ ಕಾಣತೊಡಗುತ್ತವೆ. ಅದರ ಮುಂದೆ ನಮ್ಮ ತರ್ಕಸಾಮರ್ಥ್ಯ ಸೋಲುತ್ತದೆ. ಆ ಗುರುವಿಗಿರುವ ಅನುಯಾಯಿಗಳ ಅಪಾರ ಸಂಖ್ಯೆ ನಮ್ಮ ಒಳದನಿಯನ್ನು ಮುಚ್ಚಿಹಾಕುತ್ತದೆ. ನಾವು ಎಲ್ಲರೊಳಗೊಂದಾಗ ಬಯಸುತ್ತೇವೆ.
ಆದರೆ, ಇವುಗಳಲ್ಲಿ ಯಾವುದೂ ಸತ್ಯವನ್ನು ಖಚಿತಪಡಿಸುವುದಿಲ್ಲ.
ಸಾಮಾಜಿಕ ಮಾಧ್ಯಮಗಳ ಇಂದಿನ ಜಗತ್ತಿನಲ್ಲಿ,
- ಅನುಯಾಯಿಗಳನ್ನು ಸೃಷ್ಟಿಸಬಹುದು.
- ಅಧಿಕಾರಯುತವಾಗಿ ಸುಳ್ಳನ್ನೇ ನಿಜವೆಂಬಂತೆ ಸಾಬೀತುಪಡಿಸಬಹುದು.
- ಹುಸಿ ಆತ್ಮವಿಶ್ವಾಸವನ್ನು ತೋರ್ಪಡಿಸಬಹುದು.
ಮತ್ತು ನಾವು ಈ ಅಂಶಗಳ ಆಧಾರದ ಮೇಲೆ ಒಂದು ತಪ್ಪು ಗ್ರಹಿಕೆಗೆ ಒಳಗಾಗುತ್ತೇವೆ. ಒಮ್ಮೆ ಒಂದು ತಪ್ಪು ಆಲೋಚನೆಯನ್ನು ಒಪ್ಪಿಕೊಂಡ ನಂತರ, ಅದರ ಮೇಲೆಯೇ ಮುಂದಿನ ಅರ್ಥವನ್ನು ಕಟ್ಟುತ್ತೇವೆ.
ಹೀಗೆ ತಪ್ಪುಗಳು ಕೂಡುತ್ತಾ ಹೋಗುತ್ತವೆ.
ಹಾಗಾದರೆ ನಿಜವಾಗಿ ನಮ್ಮನ್ನು ತಪ್ಪು ದಾರಿಗೆಳೆಯುವುದು ಏನು?
- ಒಂದು: —ಆ ಕ್ಷೇತ್ರದಲ್ಲಿ ನಮಗಿರುವ ಸೀಮಿತ ಜ್ಞಾನ.
- ಎರಡು: —ಅಧಿಕಾರಯುತ ಮಾತು ಅಥವಾ ಜನಪ್ರಿಯತೆ ಎಂಬ ತಪ್ಪು ಮಾಪನಗಳನ್ನು ನಂಬುವುದು.
- ಮೂರು: —ನಮ್ಮ ಮೆದುಳು ಸರಿಯಾದ ಉತ್ತರಗಳಿಗಿಂತ, ತ್ವರಿತವಾಗಿ ಮತ್ತು ಸುಲಭವಾಗಿ ಸಿಗುವ ಉತ್ತರಗಳನ್ನೇ ಆಯ್ಕೆಮಾಡುವುದು.
ಹಾಗಾದರೆ ನಾವು ಏನು ಮಾಡಬಹುದು?
ಕೆಲವು ಸ್ವಯಂ ಪ್ರೇರಿತ ಅಭ್ಯಾಸಗಳು ಸಹಾಯ ಮಾಡುತ್ತವೆ.
- ಮೊದಲು, ನಿಧಾನವಾಗಿ ನಿಮ್ಮ ಜ್ಞಾನವನ್ನು ವಿವಿಧ ಕ್ಷೇತ್ರಗಳಲ್ಲಿ ವಿಸ್ತರಿಸಿರಿ. ನಿಮ್ಮದೇ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿರಬೇಡಿ.
- ಎರಡನೆಯದಾಗಿ, ನೀವು ಯಾವುದನ್ನು ನಂಬುತ್ತೀರಿ ಎಂಬುದನ್ನು ಯಾಕೆ ನಂಬುತ್ತೀರಿ ಎಂದು ವಿವೇಚಿಸಿ ನಿರ್ಧರಿಸಿ. ಯಾರು ಹೇಳಿದರು ಎಂಬುದಕ್ಕಾಗಿಯಲ್ಲ.
- ಮೂರನೆಯದಾಗಿ, ಏನಾದರೂ ತುಂಬಾ ಪ್ರಭಾವಶೀಲವಾಗಿ ಕಂಡರೆ—ತುಸು ತಡೆಯಿರಿ. ಅದನ್ನು ಭಾಗಗಳಾಗಿ ವಿಭಜಿಸಿ. ಪ್ರತಿಯೊಂದನ್ನೂ ವಿಶ್ಲೇಷಿಸಿ. ಅದು ನಿಜವಾಗಿಯೂ ಅರ್ಥಪೂರ್ಣವಾಗಿದೆಯೇ ಎಂದು ನೋಡಿ. ಮಾನಸಿಕವಾಗಿ ಸದಾ ಜಾಗರೂಕರಾಗಿರಿ. ಸುಲಭದಲ್ಲಿ ನಿಶ್ಕರ್ಷಕ್ಕೆ ಬರಬೇಡಿ.
ಹೌದು, ಇವುಗಳಲ್ಲಿ ಕೆಲವನ್ನು ಅಳವಡಿಸಿಕೊಳ್ಳುವುದು, ವಯಸ್ಸಾದಂತೆ ಕಷ್ಟಕರವಾಗುತ್ತದೆ.
ಆದ್ದರಿಂದ ನೀವು ಪೋಷಕರು ಅಥವಾ ಶಿಕ್ಷಕರಾಗಿದ್ದರೆ, ಮಕ್ಕಳಲ್ಲಿ ಈ ರೀತಿಯ ಚಿಂತನೆಯ ವಿಧಾನವನ್ನು ಸಣ್ಣ ವಯಸ್ಸಿನಲ್ಲೇ ಬೆಳೆಸಲು ಸಹಾಯ ಮಾಡಿ. ಅದೇ ನೀವು ಅವರಿಗೆ ನೀಡುವ ಬಹುದೊಡ್ಡ ಕೊಡುಗೆ. ಒಮ್ಮೆ ಅವರು ಅದನ್ನು ಅಳವಡಿಸಿಕೊಂಡರೆಂದರೆ, ಅವರ ಜ್ಞಾನಾರ್ಜನೆಗೆ ಮಿತಿಯೇ ಇಲ್ಲ.
ಅಷ್ಟಕ್ಕೂ, ವಿಶ್ಲೇಷಣಾತ್ಮಕ ಸಾಮರ್ಥ್ಯವೆಂದರೆ ಕೇವಲ ಹೆಚ್ಚು ವಿಷಯಗಳನ್ನು ತಿಳಿದುಕೊಳ್ಳುವ ಮಾರ್ಗವಷ್ಟೇ ಅಲ್ಲ. ಅದು ಸತ್ಯವೆಂಬಂತೆ ತೋರುವ ಅನೇಕ ವಿಷಯಗಳಿಂದ ಮೋಸಹೋಗದಿರುವುದೂ ಆಗಿದೆ.

© Dr. King, Swami Satyapriya 2026

No comments:
Post a Comment